
ಪರಿಚಯ
ಕರ್ನಾಟಕ ಸರ್ಕಾರವು ನಾಗರಿಕರಿಗೆ ಸುಲಭವಾಗಿ, ವೇಗವಾಗಿ ಹಾಗೂ ಪಾರದರ್ಶಕವಾಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಲವು ನಾಗರಿಕ ಆನ್ಲೈನ್ ಪೋರ್ಟಲ್ಗಳನ್ನು (Karnataka Citizen Services Online Portals) ಅಭಿವೃದ್ಧಿಪಡಿಸಿದೆ. ಇವುಗಳ ಮೂಲಕ ಜನರು ತಮ್ಮ ದಿನನಿತ್ಯದ ಆಡಳಿತಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.
ಮೊದಲೆಲ್ಲವೂ ಜನ ಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಹೋಗಿ ದೀರ್ಘ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವುದು, ದಾಖಲೆಗಳನ್ನು ಪಡೆಯುವುದು ಸಾಮಾನ್ಯವಾಗಿತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ, ಸರ್ಕಾರವು ತಂತ್ರಜ್ಞಾನವನ್ನು ಬಳಸಿಕೊಂಡು ಜನಸಾಮಾನ್ಯರ ಸಮಯ ಮತ್ತು ಶ್ರಮವನ್ನು ಉಳಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಗಳನ್ನು ಹಾಕಿದೆ.
ಈ ಪೋರ್ಟಲ್ಗಳ ಮೂಲಕ ಜನರು ತಮಗೆ ಬೇಕಾದ ಸರ್ಕಾರಿ ಸೇವೆಗಳು ಅಂದರೆ : ಗೃಹಲಕ್ಷ್ಮಿ , ಗೃಹಾಜ್ಯೋತಿ, ಯುವನಿಧಿ, ಜನನ – ಮರಣ ಪ್ರಮಾಣಪತ್ರ, ಆದಾಯ–ಜಾತಿ ಪ್ರಮಾಣಪತ್ರ, ಭೂಮಿ ದಾಖಲೆ, ಪಿಂಚಣಿ ಅರ್ಜಿ, ವಿದ್ಯುತ್ ಬಿಲ್ ಪಾವತಿ, ನೀರಿನ ಬಿಲ್ ಪಾವತಿ, ತೆರಿಗೆ ಪಾವತಿ ಮುಂತಾದ ಸೇವೆಗಳನ್ನು ಆನ್ಲೈನ್ನಲ್ಲಿ ಪಡೆಯಬಹುದು.
ಉದಾಹರಣೆಗೆ “ಸೇವಾ ಸಿಂಧು” ಎಂಬ ಪ್ರಮುಖ ಪೋರ್ಟಲ್ ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಸಹ ನಗರಗಳಿಗೆ ಬಾರದೆಯೇ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.
ಸರ್ಕಾರದ ಈ ಡಿಜಿಟಲ್ ಪ್ರಯತ್ನವು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನಸ್ನೇಹಿ ಆಡಳಿತವನ್ನು ಉತ್ತೇಜಿಸುವ ಸಲುವಾಗಿ. ಲಂಚ, ವಿಳಂಬ, ಅಸಮರ್ಪಕ ಮಾಹಿತಿ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಈ ಪೋರ್ಟಲ್ಗಳು ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ, ಜನರಿಗೆ ತಮ್ಮ ಅರ್ಜಿಯ ಸ್ಥಿತಿ, ಸೇವೆಯ ಪ್ರಗತಿ, ಹಾಗೂ ಫಲಿತಾಂಶವನ್ನು ತಕ್ಷಣ ತಿಳಿಯುವ ಅವಕಾಶ ದೊರೆಯುತ್ತದೆ.
ಇಂದಿನ ದಿನಗಳಲ್ಲಿ, ಡಿಜಿಟಲ್ ಸೇವೆಗಳ ಬಳಕೆ ಹೆಚ್ಚುತ್ತಿರುವುದರಿಂದ, ಕರ್ನಾಟಕ ಸರ್ಕಾರದ ಈ ಡಿಜಿಟಲ್ ಪೋರ್ಟಲ್ಗಳು ಜನಜೀವನದ ಅವಿಭಾಜ್ಯ ಅಂಗವಾಗಿವೆ. ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಸರ್ಕಾರದ ಸೇವೆಗಳನ್ನು ಪಡೆಯುತ್ತಿರುವುದು, “ಡಿಜಿಟಲ್ ಕರ್ನಾಟಕ” ಕನಸನ್ನು ಸಾಕಾರಗೊಳಿಸುವತ್ತ ಒಂದು ಮಹತ್ವದ ಹೆಜ್ಜೆ.
ಒಟ್ಟಿನಲ್ಲಿ, ಕರ್ನಾಟಕ ಸರ್ಕಾರದ ಸೇವಾ ಪೋರ್ಟಲ್ಗಳು (Karnataka Citizen Services Portals) ಜನಸಾಮಾನ್ಯರ ಜೀವನವನ್ನು ಸುಲಭಗೊಳಿಸುವ, ಪಾರದರ್ಶಕ ಆಡಳಿತವನ್ನು ಬಲಪಡಿಸುವ, ಹಾಗೂ ತಂತ್ರಜ್ಞಾನವನ್ನು ಜನಸೇವೆಗಾಗಿ ಬಳಸುವ ಉತ್ತಮ ಮಾದರಿಯಾಗಿದೆ.
ಸರ್ಕಾರವು ನಾಗರೀಕ ಸೇವೆಗಾಗಿ ನಿರ್ಮಿಸಿರುವ ಪ್ರಮುಖ ಸೇವಾ ಪೋರ್ಟಲ್(web portals) ಗಳನ್ನು ಕೆಳಗೆ ವಿವರಿಸಿದ್ದೇವೆ.
ರಾಜ್ಯದ ಜನರಿಗೆ ಉಪಯುಕ್ತವಾದ 5 ಕರ್ನಾಟಕ ನಾಗರಿಕ ಸೇವಾ ಪೋರ್ಟಲ್ಗಳು / ವೆಬ್ಸೈಟ್ಗಳು (Citizens Online service Portals in Karnataka)
ಈ ಪೋರ್ಟಲ್ಗಳ ಮೂಲಕ ಸಮಯ ಮತ್ತು ಹಣವನ್ನು ಉಳಿಸಿಕೊಳ್ಳಬಹುದು, ಕಚೇರಿ ಸುತ್ತಾಟವನ್ನು ತಪ್ಪಿಸಬಹುದು ಮತ್ತು ಅರ್ಜಿಯ ಸ್ಥಿತಿಯನ್ನು ನೇರವಾಗಿ ಪರಿಶೀಲಿಸಬಹುದು. ಈ ಲೇಖನದಲ್ಲಿ ಕರ್ನಾಟಕ ಸರ್ಕಾರದ ಪ್ರಮುಖ ನಾಗರಿಕ ಸೇವಾ ಪೋರ್ಟಲ್ಗಳು ಯಾವುವು? , ಅವುಗಳ ಪ್ರಯೋಜನಗಳು ಏನು, ಮತ್ತು ಅವುಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
1. ಸೇವಾ ಸಿಂಧು

ಇದು ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ನಾಗರಿಕ ಸೇವಾ ಕೇಂದ್ರಗಳಲ್ಲಿ ಒಂದಾಗಿದ್ದು, ಬಹುತೇಕ ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ನಾಗರಿಕರು ಪ್ರಮಾಣಪತ್ರ (Certificates), ಅರ್ಜಿ, ಬಿಲ್ ಪಾವತಿ, ಯೋಜನೆಗಳ ಲಾಭ ಪಡೆಯುವುದು ಹಾಗೂ ಅರ್ಜಿಯ ಸ್ಥಿತಿಯನ್ನು (Application Status) ಪರಿಶೀಲನೆ ಮಾಡಬಹುದಾಗಿದೆ.
ಪ್ರಮುಖ ಸೇವೆಗಳು
- ಪ್ರಮಾಣಪತ್ರಗಳು: ಆದಾಯ, ಜಾತಿ, ಜನನ–ಮರಣ ಪ್ರಮಾಣಪತ್ರ.
- ಸಾರಿಗೆ ಸೇವೆಗಳು: ವಿದ್ಯಾರ್ಥಿಗಳ ಬಸ್ ಪಾಸ್ ಸೇವೆ (KSRTC, NWKRTC, KKRTC).
- ಭೂಮಿ ಮತ್ತು ಆಸ್ತಿ ದಾಖಲೆಗಳು: Bhoomi, Kaveri Online Service.
- ಯೋಜನೆಗಳ ಅರ್ಜಿ: ಗೃಹ ಜ್ಯೋತಿ , ಗೃಹ ಲಕ್ಷ್ಮಿ , ಯುವನಿಧಿ ಮುಂತಾದ ಕಲ್ಯಾಣ ಯೋಜನೆಗಳ ಅರ್ಜಿಸಲ್ಲಿಸಬಹುದು ಮತ್ತು ಸೇವೆ ಪಡೆಯಬಹುದು.
- ಬಿಲ್ ಪಾವತಿ ಮತ್ತು ತೆರಿಗೆಗಳು: ವಿದ್ಯುತ್, ನೀರು, ಆಸ್ತಿ ತೆರಿಗೆಯಂತ ಬಿಲ್ ಪಾವತಿಸಬಹುದು.
- ಅರ್ಜಿಯ ಸ್ಥಿತಿ ಪರಿಶೀಲನೆ : ಅರ್ಜಿ ಸಲ್ಲಿಸಿದ ನಂತರ ಅದರ ಪ್ರಗತಿ ಸ್ಥಿತಿ ತಿಳಿಯುವ ಅವಕಾಶ ಇರುತ್ತದೆ.
- ತಿದ್ದುಪಡಿ: ಆಧಾರ್ , ಮತದಾರ ಗುರುತಿನ ಚೀಟಿ , ಪಡಿತರ ಚೀಟಿ ತಿದ್ದುಪಡಿ ಮಾಡಬಹುದು.
ಸೇವಾ ಕೇಂದ್ರದ ಪ್ರಯೋಜನಗಳು
- ಪಾರದರ್ಶಕತೆ: ಲಂಚ, ವಿಳಂಬ ಕಡಿಮೆ.
- ಸಮಯ ಉಳಿತಾಯ: ಕಚೇರಿಗಳಿಗೆ ಹೋಗದೆ ಮನೆಯಿಂದಲೇ ಸೇವೆ.
- ಗ್ರಾಮೀಣ ಜನರಿಗೆ ಸಹಾಯ: ನಗರಗಳಿಗೆ ಬಾರದೆಯೇ ಸೇವೆ ಪಡೆಯುವ ಅವಕಾಶ.
- ಜನಸ್ನೇಹಿ ಆಡಳಿತ: ತ್ವರಿತ, ಸುಲಭ, ಹೊಣೆಗಾರಿಕೆಯ ಸೇವೆ.
2. ಕರ್ನಾಟಕ ಒನ್

ಕರ್ನಾಟಕ ಒನ್ ಒಂದು ಕರ್ನಾಟಕ ಸರ್ಕಾರದ ನಿರ್ದೇಶನಾಲಯದಡಿ (e-Governance) ಕಾರ್ಯನಿರ್ವಹಿಸುವ “Bangalore One” ಮಾದರಿಯಲ್ಲಿ ಒಂದೇ ಸೂರಿನಡಿ ನಾಗರಿಕರಿಗೆ ಆನ್ಲೈನ್ ಮೂಲಕ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ವೇದಿಕೆಯಲ್ಲಿ, ಸುಲಭವಾಗಿ, ಸುರಕ್ಷಿತವಾಗಿ, ಪಾರದರ್ಶಕವಾಗಿ ಒದಗಿಸುವ ಒಂದು ಏಕೀಕೃತ ಯೋಜನೆ.
ಕರ್ನಾಟಕ ಒನ್ ಸೇವೆಗಳ ವ್ಯಾಪ್ತಿ: ಸರ್ಕಾರಿ ಇಲಾಖೆಗಳು, ಖಾಸಗಿ ಕಂಪನಿಗಳು, ಬ್ಯಾಂಕ್ಗಳು, ಬಿಲ್ ಪಾವತಿ, ದಾಖಲೆ ಸೇವೆಗಳು ಇತ್ಯಾದಿ.
ಪ್ರಮುಖ ಸೇವೆಗಳು
- ಆಧಾರ್ ಕಾರ್ಡ್ ಅರ್ಜಿ
- ಮತದಾರರ ಗುರುತಿನ ಚೀಟಿ ಪರಿಶೀಲನೆ
- ಪಾಸ್ಪೋರ್ಟ್ ಸೇವೆಗಳು
- ಪಿಎಫ್ (Provident Fund) ಸಂಬಂಧಿತ ಸೇವೆಗಳು
- ವಿದ್ಯುತ್, ನೀರು, ದೂರವಾಣಿ ಬಿಲ್ ಪಾವತಿ
- ಪಾನ್ ಕಾರ್ಡ್, ಚಾಲನಾ ಪರವಾನಗಿ ಅರ್ಜಿ
ಕರ್ನಾಟಕ ಒನ್ ಸೇವಾ ಕೇಂದ್ರದ ವೈಶಿಷ್ಟ್ಯಗಳು
- ಏಕೀಕೃತ ಸೇವೆಗಳು: ನಾಗರಿಕರಿಗೆ ಬೇಕಾದ ಎಲ್ಲಾ ಸೇವೆಗಳು ಒಂದೇ ಪೋರ್ಟಲ್ನಲ್ಲಿ ಪಡೆಯಬಹುದು.
- ಸಮಯ-ಸ್ಥಳದ ನಿರ್ಬಂಧವಿಲ್ಲ: ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಸೇವೆ ಪಡೆಯಬಹುದು.
- ಸುರಕ್ಷತೆ ಮತ್ತು ಪಾರದರ್ಶಕತೆ: ಮಾಹಿತಿ ತಂತ್ರಜ್ಞಾನ (ಐಟಿ) ಮೂಲಕ ಸುರಕ್ಷಿತ ಸೇವೆ ಒದಗಿಸುತ್ತದೆ.
- ಹಲವು ಮಾಧ್ಯಮಗಳ ಮೂಲಕ ಸೇವೆ: ಆನ್ಲೈನ್, ಮೊಬೈಲ್ ಆಪ್, ಹಾಗೂ ಸ್ಥಳೀಯ ಆನ್ಲೈನ್ ಕೇಂದ್ರಗಳಲ್ಲಿ ಲಭ್ಯವಿದೆ.
3. ಸಕಾಲ

“ಇಂದು ನಾಳೆ ಇನ್ನಿಲ್ಲ, ಹೇಳಿದ ದಿನ ತಪ್ಪಲ್ಲ ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕದಲ್ಲಿ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ನಿಗದಿತ ಅವಧಿಯಲ್ಲಿ ಒದಗಿಸುವ ಹಾಗೂ ಕಾನೂನುಬದ್ಧ ಹಕ್ಕು ನೀಡುವ ವ್ಯವಸ್ಥೆ. ಇದು 2011ರಲ್ಲಿ Karnataka Sakala Services Act ಜಾರಿಗೆ ಬಂದು, 2012ರಿಂದ “ಸಕಾಲ” ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದರ ಉದ್ದೇಶ ನಾಗರಿಕರಿಗೆ 100ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳ 1,400+ ಸೇವೆಗಳನ್ನು ನಿಗದಿತ ಸಮಯದಲ್ಲಿ ಒದಗಿಸುವುದು.
ಪ್ರಮುಖ ಸೇವೆಗಳು
- ಖಾತಾ ನೋಂದಣಿ ಮತ್ತು ವರ್ಗಾವಣೆ (BBMP, Revenue Department)
- ಜನನ/ಮರಣ ಪ್ರಮಾಣಪತ್ರ
- ಕಾಸು ಪಾವತಿ, ದಾಖಲೆ ಪ್ರಮಾಣೀಕರಣ
- ವಿದ್ಯುತ್, ನೀರು, ಆಸ್ತಿ ತೆರಿಗೆ ಸಂಬಂಧಿತ ಸೇವೆಗಳು
- ಪಾಸ್ಪೋರ್ಟ್, ಚಾಲನಾ ಪರವಾನಗಿ, ಪಾನ್ ಕಾರ್ಡ್ ಅರ್ಜಿ
- ವಿದ್ಯಾರ್ಥಿ ಬಸ್ ಪಾಸ್, ಸಾಮಾಜಿಕ ಕಲ್ಯಾಣ ಯೋಜನೆಗಳ ಅರ್ಜಿ
ಕಾರ್ಯವಿಧಾನ
- ಅರ್ಜಿದಾರರಿಗೆ GSC ಸಂಖ್ಯೆ (Guarantee of Services to Citizens) ನೀಡಲಾಗುತ್ತದೆ.
- ಅರ್ಜಿಯ ಸ್ಥಿತಿ: ಅರ್ಜಿಯ ಸ್ಥಿತಿಯನ್ನು GSC ಸಂಖ್ಯೆ ನೆರವಿನಿಂದ ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು.
- ಸಮಯ ಪಾಲನೆ : ಸಮಯ ಮೀರಿದರೆ ನಾಗರಿಕರು ಮೇಲ್ಮನವಿ ಸಲ್ಲಿಸಬಹುದು ಹಾಗೂ ವಿಳಂಬಕ್ಕೆ ಸಂಬಂಧಿಸಿದಂತೆ ಪರಿಹಾರ (compensation) ಪಡೆಯುವ ಹಕ್ಕು ಇದೆ.
- ಮಾಹಿತಿ ತಂತ್ರಜ್ಞಾನ (IT) ವ್ಯವಸ್ಥೆ: NIC (National Informatics Centre) ಅಭಿವೃದ್ಧಿಪಡಿಸಿದ ಸುಧಾರಿತ ಮಾಹಿತಿ ತಂತ್ರಜ್ಞಾನ ಬಳಕೆ ಇಂದ ವ್ಯವಸ್ತಿತವಾಗಿದೆ .
ಸಕಾಲದ ಮಹತ್ವ
- ಪಾರದರ್ಶಕತೆ: ನಾಗರಿಕರಿಗೆ ಹಕ್ಕುಬದ್ಧ ಪಾರದರ್ಶಕ ಸೇವೆ ನೀಡುವುದು.
- ಸಮಯಾಧಾರಿತ : ನಿಗದಿತ ಅವಧಿಯಲ್ಲಿ ಸೇವೆ ಸಲ್ಲಿಸುವುದು.
- ಹೆಚ್ಚುವರಿ ಹಕ್ಕು: ವಿಳಂಬವಾದರೆ ಪರಿಹಾರ ಪಡೆಯುವ ಅವಕಾಶ ಇರುತ್ತದೆ.
- ಸರ್ಕಾರಿ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಿಸುವುದು ಆಗಿದೆ.
4. ಮಾಹಿತಿ ಕಣಜ(Mahiti Kanaja)

ಮಾಹಿತಿ ಕಣಜವು ಮಾಹಿತಿ ಹಕ್ಕು (Right to Information Act) Section 4(2) ಪ್ರಕಾರ, ಸರ್ಕಾರವು ಸ್ವಯಂಪ್ರೇರಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು 2020ರಲ್ಲಿ ಪ್ರಾರಂಭಗೊಂಡಿದ್ದು. ಕರ್ನಾಟಕ ಸರ್ಕಾರದ ಏಕೀಕೃತ ಮಾಹಿತಿ ಕೇಂದ್ರ ಆಗಿದೆ,
ಈ ಮೂಲಕ ನಾಗರಿಕರಿಗೆ ಎಲ್ಲಾ ಸರ್ಕಾರಿ ಇಲಾಖೆಗಳ(150ಕ್ಕೂ ಹೆಚ್ಚು ಇಲಾಖೆಗಳ) ಮಾಹಿತಿ ಮತ್ತು ಸಾರ್ವಜನಿಕ ನಿಧಿಗಳ ಬಳಕೆಯ ವಿವರಗಳನ್ನು ಒಂದೇ ಜಾಗದಲ್ಲಿ ಅಂದರೆ ಮಾಹಿತಿ ಕಣಜ ದಲ್ಲಿ ಪಾರದರ್ಶಕವಾಗಿ ಒದಗಿಸುತ್ತದೆ.
ಪ್ರಮುಖ ವೈಶಿಷ್ಟ್ಯಗಳು
- ಸೇವೆಗಳ ವಿವರಗಳು: ಪಿಂಚಣಿ, ಪಡಿತರ ಚೀಟಿ(Ration card), RTC (Record of Rights, Tenancy and Crops), FIR ಮಾನ್ಯತೆ, ಗ್ರಾಮ ನಕ್ಷೆ ಡೌನ್ಲೋಡ್.
- ಜಿಲ್ಲಾವಾರು ಮಾಹಿತಿ: ವಿಶ್ವವಿದ್ಯಾಲಯಗಳು, ಕಾಲೇಜುಗಳು, ಗ್ರಾಮ ಪಂಚಾಯಿತಿ ಮಟ್ಟದ ಸೇವೆಗಳನ್ನು ಪಡೆಯಬಹುದು.
- ಸಮಗ್ರ ಪರಿಶೀಲನೆ: ಇಲಾಖಾವಾರು, ಪ್ರದೇಶವಾರು ಮಾಹಿತಿಯನ್ನು ನಕ್ಷೆ ಮತ್ತು ಚಾರ್ಟ್ ರೂಪದಲ್ಲಿ ವೀಕ್ಷಿಸಬಹುದು.
- ಲಾಗಿನ್ ಅಗತ್ಯವಿಲ್ಲ: ಯಾವುದೇ username/password ಇಲ್ಲದೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುತ್ತದೆ.
ನಾಗರಿಕರಿಗೆ ಲಾಭ
- ಪಾರದರ್ಶಕತೆ: ಸಾರ್ವಜನಿಕ ನಿಧಿಗಳ ಬಳಕೆ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯಲು ಅನುಕೂಲವಾಗಿದೆ.
- ಉಪಯುಕ್ತ ಮಾಹಿತಿ: RTI ಅರ್ಜಿ ಹಾಕದೆ ನೇರವಾಗಿ ಮಾಹಿತಿ ಪಡೆಯಬಹುದು.
- ಸರ್ಕಾರದ ಹೊಣೆಗಾರಿಕೆ: ಇಲಾಖೆಗಳು ತಮ್ಮ ಮಾಹಿತಿಯನ್ನು ನಿಯಮಿತವಾಗಿ ಪ್ರಕಟಿಸಬೇಕಾಗುತ್ತದೆ.
- ಸಮಗ್ರ ಸೇವಾ ಕೇಂದ್ರ: ಗ್ರಾಮ, ತಾಲ್ಲೂಕು, ಜಿಲ್ಲೆ ಮಟ್ಟದ ಸೇವೆಗಳ ವಿವರ ಒಂದೇ ಜಾಗದಲ್ಲಿಪಡೆಯಬಹುದು.
5. ಕರ್ನಾಟಕ ರಾಜ್ಯ ಪೋರ್ಟಲ್

ಕರ್ನಾಟಕ ರಾಜ್ಯ ಪೋರ್ಟಲ್ (Karnataka State Portal): https://www.karnataka.gov.in ಎಂಬುದು ಕರ್ನಾಟಕ ಸರ್ಕಾರದ ಅಧಿಕೃತ ಅಂತರ್ಜಾಲ ಡಿಜಿಟಲ್ ವೇದಿಕೆ. ಇದು ನಾಗರಿಕರಿಗೆ ಕರ್ನಾಟಕದ ಎಲ್ಲಾ ಇಲಾಖೆಗಳ ಮಾಹಿತಿ, ಯೋಜನೆಗಳು, ಸೇವೆಗಳು ಹಾಗೂ ಸಂಪರ್ಕ ವಿವರಗಳನ್ನು ಒಂದೇ ಜಾಗದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒದಗಿಸುತ್ತದೆ.
ಪ್ರಮುಖ ವೈಶಿಷ್ಟ್ಯಗಳು
- ಸರ್ಕಾರಿ ಡೈರೆಕ್ಟರಿ: ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳ ಸಂಪರ್ಕ ವಿವರಗಳು ಒಂದೇ ಸ್ಥಳದಲ್ಲಿ ಪಡೆಯಬಹುದು.
- ನಾಗರಿಕ ಸೇವೆಗಳು: ಗೃಹ ಲಕ್ಷ್ಮಿ, ಅನ್ನ ಭಾಗ್ಯರೀತಿಯ ಹಲವು ಯೋಜನೆಗಳ ಮಾಹಿತಿ ಒದಗಿಸುತ್ತದೆ.
- ಉದ್ಯೋಗ ಮತ್ತು ಪರೀಕ್ಷೆಗಳು: KPSC, UPSC, ಸರ್ಕಾರಿ ಉದ್ಯೋಗಗಳ ಬಗ್ಗೆ ಅಧಿಸೂಚನೆಗಳು ಹಾಗೂ ಮಾಹಿತಿ ಒದಗಿಸುತ್ತದೆ.
- ಶಿಕ್ಷಣ: ವಿಶ್ವವಿದ್ಯಾಲಯಗಳು, ಗ್ರಂಥಾಲಯಗಳು, ವಿದ್ಯಾರ್ಥಿ ವೇತನ ಮಾಹಿತಿ ಪಡೆಯಬಹುದು.
- e-Services: ಸಕಾಲ, ಕರ್ನಾಟಕ ಒನ್, ಮಾಹಿತಿ ಕಣಜ ಮುಂತಾದ ಪೋರ್ಟಲ್ಗಳಿಗೆ ನೇರ ಲಿಂಕ್ ಕಲ್ಪಿಸುತ್ತದೆ.
- ಸಂಸ್ಕೃತಿ ಮತ್ತು ಪ್ರವಾಸೋದ್ಯಮ: ಜಿಲ್ಲೆಗಳ ವಿವರ, ಜನಸಂಖ್ಯಾ ಅಂಕಿಅಂಶಗಳು, ಪ್ರವಾಸಿ ತಾಣಗಳು, ರಜಾದಿನಗಳ ಮಾಹಿತಿ ಸಹ ಲಭ್ಯ.
- ಡೌನ್ಲೋಡ್ ವಿಭಾಗ: ಕಾಯಿದೆಗಳು, ನಿಯಮಗಳು, ಅರ್ಜಿ ನಮೂನೆಗಳ ಪ್ರತಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಮಹತ್ವ
- ಪಾರದರ್ಶಕತೆ – ನಾಗರಿಕರಿಗೆ ಸರ್ಕಾರದ ಯೋಜನೆಗಳು ಮತ್ತು ನಿಧಿಗಳ ಬಳಕೆಯ ಪಾರದರ್ಶಕ ಮಾಹಿತಿ ಪಡೆಯಬಹುದು.
- ಸುಲಭ ಸೇವೆ – ಅಗತ್ಯ ಎಲ್ಲಾ ಸೇವೆಗಳು ಒಂದೇ ಜಾಲತಾಣದಲ್ಲಿ ಲಭ್ಯತೆ ಇಂದಾಗಿ ಸೇವೆ ಪಡೆಯುವುದು ಸುಲಭ.
- ದೂರಿನ ಸೌಲಭ್ಯ– ಪ್ರಮಾಣಪತ್ರ, ಯೋಜನೆ ಅರ್ಜಿಗಳ (scheme applications) ಸಂಭಂದ online ನಲ್ಲಿ ದೂರು ಸಲ್ಲಿಸುವ ಸೌಲಭ್ಯವಿದೆ.
- ಏಕೀಕರಣ– ಕರ್ನಾಟಕ ಒನ್ (Karnataka-one), ಸಕಾಲ, ಮಾಹಿತಿ ಕಣಜದಂತ ಮುಂತಾದ ಜಾಲ ತಾಣಗಳ ಸೇವೆ ಒಂದೇ ಜಾಗದಲ್ಲಿ ಲಭ್ಯವಿರುವುದರಿಂದ ಸಂಭಂದ ಪಟ್ಟ ಸೇವೆ ಪಡೆಯುವುದು ಸುಲಭ.
ಹಿನ್ನುಡಿ
ಒಟ್ಟಾರೆಯಾಗಿ, ಕರ್ನಾಟಕ ನಾಗರಿಕ ಸೇವಾ Online ಪೋರ್ಟಲ್ಗಳು (karnataka government citizen online service portals) ರಾಜ್ಯದ ಜನರಿಗೆ ಸುಲಭ, ವೇಗವಾದ ಮತ್ತು ಪಾರದರ್ಶಕ ಸೇವೆಗಳನ್ನು ಒದಗಿಸುವ ಮಹತ್ವದ ಡಿಜಿಟಲ್ ವೇದಿಕೆಗಳಾಗಿವೆ. ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಈಗ ಕೇವಲ ಕೆಲವು ಕ್ಲಿಕ್ಕುಗಳಲ್ಲಿ ಲಭ್ಯವಾಗುತ್ತಿರುವುದು ಡಿಜಿಟಲ್ ಕರ್ನಾಟಕದ ದೊಡ್ಡ ಸಾಧನೆಯಾಗಿದೆ.
ಈ ಪೋರ್ಟಲ್ಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಸಮಯ ಹಾಗೂ ಹಣವನ್ನು ಉಳಿಸಿಕೊಳ್ಳುವುದರ ಜೊತೆಗೆ ಕಚೇರಿ ಸುತ್ತಾಟವನ್ನು ತಪ್ಪಿಸಬಹುದು. ನಾಗರಿಕರು ಈ ಆನ್ಲೈನ್ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು, ತಮ್ಮ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಂಡರೆ ಜೀವನ ಇನ್ನಷ್ಟು ಸುಗಮವಾಗುತ್ತದೆ. ಆನ್ಲೈನ್ ಸೇವೆಗಳ ಹಾಗು ಸರ್ಕಾರಿ ಆಪ್ಸ್ ಗಳ ಬಳಕೆ ಹೆಚ್ಚಿದಂತೆ, ಭವಿಷ್ಯದಲ್ಲಿ ಇನ್ನಷ್ಟು ಸುಧಾರಿತ ಮತ್ತು ಸುಲಭವಾದ ಸರ್ಕಾರಿ ಸೇವೆಗಳು ಜನರಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು
1. ಕರ್ನಾಟಕ ನಾಗರಿಕ ಸೇವಾ ಆನ್ಲೈನ್ ಪೋರ್ಟಲ್ಗಳು ಎಂದರೇನು?
ಕರ್ನಾಟಕ ಸರ್ಕಾರವು ನಾಗರಿಕರಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲು ನಿರ್ಮಿಸಿರುವ ಡಿಜಿಟಲ್ ವೇದಿಕೆಗಳನ್ನೇ ನಾಗರಿಕ ಸೇವಾ ಪೋರ್ಟಲ್ಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲಕ ಪ್ರಮಾಣಪತ್ರಗಳು, ಭೂಮಿ ದಾಖಲೆಗಳು, ಬಿಲ್ ಪಾವತಿಗಳು ಮುಂತಾದ ಸೇವೆಗಳು ಲಭ್ಯವಿರುತ್ತವೆ.
2. ಈ ಪೋರ್ಟಲ್ಗಳ ಮೂಲಕ ಯಾವ ಸೇವೆಗಳು ಲಭ್ಯವಿರುತ್ತವೆ?
ಆದಾಯ, ಜಾತಿ ಮತ್ತು ವಾಸಸ್ಥಳ ಪ್ರಮಾಣಪತ್ರಗಳು, ಭೂಮಿ ದಾಖಲೆ (RTC), ಜನನ-ಮರಣ ಪ್ರಮಾಣಪತ್ರ, ವಿದ್ಯಾರ್ಥಿವೇತನ ಅರ್ಜಿ, ವಿದ್ಯುತ್/ನೀರು ಬಿಲ್ ಪಾವತಿ ಸೇರಿದಂತೆ ಅನೇಕ ಸೇವೆಗಳು ಲಭ್ಯವಿರುತ್ತವೆ.
3. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಅಗತ್ಯ?
ಸಾಮಾನ್ಯವಾಗಿ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಮತ್ತು ಸಂಬಂಧಿತ ಸೇವೆಗೆ ಬೇಕಾದ ದಾಖಲೆಗಳ ಸ್ಕ್ಯಾನ್ ಪ್ರತಿಗಳು ಅಗತ್ಯವಾಗಿರುತ್ತವೆ.
4. ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು?
ಸಂಬಂಧಿತ ಪೋರ್ಟಲ್ನಲ್ಲಿ “Track Application Status” ಅಥವಾ “Application Status” ಆಯ್ಕೆಯನ್ನು ಬಳಸಿಕೊಂಡು ಅರ್ಜಿ ಸಂಖ್ಯೆ ಮೂಲಕ ಸ್ಥಿತಿಯನ್ನು ಪರಿಶೀಲಿಸಬಹುದು.
5. ಈ ಪೋರ್ಟಲ್ಗಳನ್ನು ಬಳಸಲು ಶುಲ್ಕವಿದೆಯೇ?
ಹೆಚ್ಚಿನ ಸೇವೆಗಳು ಉಚಿತವಾಗಿದ್ದು, ಕೆಲವು ಪ್ರಮಾಣಪತ್ರಗಳಿಗೆ ಅಥವಾ ವಿಶೇಷ ಸೇವೆಗಳಿಗೆ ಸರ್ಕಾರ ನಿಗದಿಪಡಿಸಿದ ಕಡಿಮೆ ಶುಲ್ಕ ಇರಬಹುದು.
6. ತಾಂತ್ರಿಕ ಸಮಸ್ಯೆಗಳು ಎದುರಾದರೆ ಏನು ಮಾಡಬೇಕು?
ಪೋರ್ಟಲ್ನಲ್ಲಿ ನೀಡಿರುವ ಸಹಾಯವಾಣಿ (Helpline) ಸಂಖ್ಯೆ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು. ಅಲ್ಲದೇ ಸಮೀಪದ ನಾಗರಿಕ ಸೇವಾ ಕೇಂದ್ರ (CSC) ಗಳಲ್ಲಿ ಸಹಾಯ ಪಡೆಯಬಹುದು.









